Sunday 15 November 2009

ನೀನಾದರೂ......



ಬೀಳದೆ, ಒಡೆದ ಕನಸುಗಳಿಗೆ ತೇಪೆ ಹಾಕಿ,
ಮಾರಾತಕ್ಕಿಟ್ಟಿರುವೆ ಮನದ ಅಂಗಡಿಯಲಿ.
ಖರೀದಿಸುವವರಿಲ್ಲದೆ ಮುಗ್ಗುತಿವೆ,
ಕೊಳ್ಳಬಾರದೆ ನೀನಾದರೂ....

ಹೂಳದೇ ಹುಸಿಯಾಡುವ ಸಮಾಧಿಯ ಅಗೆದು,
ಸಾಯದ ಒಲವನು ತೆರೆದಿಟ್ಟಿರುವೆ
ನಂಬುತ್ತಿಲ್ಲ ಸತ್ಯವ ಯಾರೂ ಕೂಡಾ,
ನನಬಬಾರದೆ ನೀನಾದರೂ ....

ಅವ್ಯಕ್ತ ಭಾವಗಳು ವ್ಯಕ್ತಪಡಿಸಲಾಗದೆ
ಹೃದಯ-ಸಾಗರದಾಳ ಸೇರಿವೆ.
ಈಜಬಾರದವರೇ ಇಲ್ಲಿ ಎಲ್ಲ,
ಭಾವೋತ್ಖನನಕ್ಕೆ ನೆರವಾಗಬಾರದೇ ನೀನಾದರೂ..

ಬರೆಯದ ಪುಸ್ತಕವನ್ನು ಎರವಲು ತಂದು ,
ಓದಲು ಕುಳಿತಿರುವೆ ತನ್ಮಯದಿ
ಓದಲಾಗುತ್ತಿಲ್ಲ ಒಲವ ಮಬ್ಬಿನಲಿ,
ಅಕ್ಷರವಾಗಬಾರದೆ ನೀನಾದರೂ .....

ಬೀಳದ ಜಡಿ ಮಳೆಗೆ ಮೈಯೊಡ್ಡಿ
ಕಾಣದ ಕಾಮನ ಬಿಲ್ಲನು ಹುಡುಕುತಿರುವೆ
ತೋರಿಸಲಾರದ ಕುರುಡರೇ ಎಲ್ಲ,
ತೋರಿಸಿಬಿಡಬಾರದೇ ನೀನಾದರೂ...

"ನೆರಳೇ ಸಂಗ ತೊರೆದ ನಿರ್ಭಾಗಿ ನಾನು
ನನ್ನವಳನ್ನಾಗಿಸದ ನಿನ್ನ ಕಳೆದುಕೊಳ್ಳುವ ಭಯವಿಲ್ಲದಿದ್ದರೂ
ನನ್ನದೇ ಪ್ರಪಂಚದಲ್ಲಿ ನಾನು ಕಳೆದುಕೊಳ್ಳುವುದನ್ನು ತಪ್ಪಿಸಲು
ಬರಬಾರದೇ ಕೊನೆಯದಾಗಿ ನಿನಾದರೂ? "

Vinco, Capuchin.
(Published by 'Dootha' monthly, October 2009)





No comments:

Post a Comment